ಜೋಗಿತಿ ಸಂಪ್ರದಾಯ

ಜನಪದ ಧಾರ್ಮಿಕ ವೃತ್ತಿಗಾಯಕರಲ್ಲಿ ಗೋಂದಲಿಗರು ಮತ್ತು ಜೋಗಿಯರು ಎಲ್ಲಮ್ಮನಿಗೆ ನಡೆದುಕೊಳ್ಳುವ ಒಂದು ವಿಶಿಷ್ಟ ಸಂಪ್ರದಾಯಕ್ಕೆ ಈ ಹೆಸರಿದೆ.

	ಬೆಳಗಾಂವಿ ಜಿಲ್ಲೆಯ ಪರಸಗಡ ತಾಲ್ಲೂಕಿನ ಸವದತ್ತಿಗೆ ಸಮೀಪದಲ್ಲಿರುವ ಎಲ್ಲಮ್ಮನ ಗುಡ್ಡದಲ್ಲಿ ಪ್ರತಿ ಹುಣ್ಣಿಮೆಗೂ ಜಾತ್ರೆ ನಡೆಯುತ್ತದೆ. ಮೊಟ್ಟ ಮೊದಲ ಸಲಕ್ಕೆ ಜಾತ್ರೆಗೆ ಹೋದ ಯಾರೂ ತಬ್ಬಿಬ್ಬಾಗುವಂಥ ವಿಚಿತ್ರ ನೋಟವೊಂದು ಕಣ್ಣಿಗೆ ಬೀಳುತ್ತದೆ. ಸೊಂಟಕ್ಕೆ ಸಿಕ್ಕಿಕೊಂಡಿರುವ ಸಣ್ಣ ಚೀಲವೊಂದರಿಂದ ಎಲ್ಲಮ್ಮನ ಭಂಡಾರವೆಂದು, ಹೇಳುವ ಹಳದಿ ಪುಡಿಯನ್ನು ಬಂದವರ ಹಣೆಗೆಲ್ಲ ಹಚ್ಚಿ ಕಾಸಿಗಾಗಿ ಕೈಯೊಡ್ಡುವವರು ಗಂಡಸರೋ ಹೆಂಗಸರೋ ಎಂಬುದನ್ನು ಅವರ ವೇಷಭೂಷಣಗಳಿಂದ ನಿರ್ಧರಿಸಲಾಗದ ಸೋಜಿಗವನ್ನು ಅಲ್ಲಿ ಕಾಣಬಹುದು.

	ಗಂಡಸರು ಹೆಂಗಸರಂತೆ ಓಲೆ, ತಾಳಿ, ಮೂಗುತಿ, ಬಳೆ, ಬುಗಡಿ, ಕಡಗ, ಕಾಲಂದುಗೆ, ಸೀರೆ, ರವಕೆ, ಎಲ್ಲಮ್ಮನ ಮುತ್ತಿನ ಸರ, ಕವಡೆಸರ, ಕಾಸಿನಗಲ ಕುಂಕುಮಗಳನ್ನು ಧರಿಸಿ, ಬೆಡಗುಬಿನ್ನಾಣಗಳಿಂದ, ಒನಪು ಒಯ್ಯಾರಗಳಿಂದ ಓಡಾಡುವ ದೃಶ್ಯ ಭಯವಿಸ್ಮಯವನ್ನು ಹುಟ್ಟಿಸುತ್ತದೆ. ಪ್ರಕೃತಿಯನ್ನೇ ಪ್ರತಿಭಟಿಸಿ ನಿಲ್ಲುವ ಈ ಸಾಹಸ ಎಂಥವರನ್ನೂ ದಂಗುಬಡಿಸುತ್ತದೆ.

	ದಷ್ಟಪುಷ್ಟ ಬಲಿಷ್ಠ ಗಂಡಸು ನಪುಂಸಕನಂಥೆ ನುಲುಚಾಡುವ ಈ ಪರಿಸ್ಥತಿಯನ್ನು ಅವನಾಗಿಯೇ ಅಭಿಮಾನದಿಂದ ಬರಮಾಡಿಕೊಂಡಿದ್ದಲ್ಲ ಹುಟ್ಟಿನಿಂದಲೂ ಆತ ನಪುಂಸಕನಾಗಿರುವುದಿಲ್ಲ. ಆದರೆ ಅವನು ತನ್ನ ಪುರುಷತ್ವವನ್ನು ತನ್ನ ಜನಾಂಗದ ಹಿರಿಯರ ಆದೇಶ ಮೇರೆಗೆ ಬಲಿಕೊಡಬೇಕಾಗಿ ಬರುವ ಈ ಸಂಪ್ರದಾಯ ಇಂದಿಗೂ ಜೀವಂತವಾಗಿದ್ದು ಯಾವ ನಾಗರಿಕತೆಯ ಪ್ರಭಾವಕ್ಕೂ ಕರಗದ ಕಗ್ಗಲ್ಲಿನಂತೆ ಉಳಿದುಬಂದಿದೆ. ಈ ವಿಷಯದಲ್ಲಿ ಅವರಿಗೆ ಅಚಲವಾದ ನಂಬಿಕೆಯಿದೆ ಕಠೋರವಾದ ನಿಷ್ಠೆಯಿದೆ. ಲೈಂಗಿಕ ಭಾವನೆಗಳು ಅರಳುವ ಮುನ್ನವೇ ಮುಗ್ಧ ಬಾಲಕನ ಬಾಳನ್ನು ಈ ಸ್ಥಿತಿಗೆ ಇಳಿಸುವ ಸಂಪ್ರದಾಯವೇ ಜೋಗಿತಿ ಸಂಪ್ರದಾಯದ ಒಂದು ಕ್ರಮ.

	ಜೋಗಿತಿ ಸಂಪ್ರದಾಯ ತಲತಲಾಂತರದಿಂದ ನಡೆದುಬಂದ ಪದ್ಧತಿ. ಗಂಡಸಿಗೆ ಹೆಣ್ಣುಡಿಗೆಗಳನ್ನು ತೊಡಿಸುವಂತೆ ಹೆಂಗಸಿಗೆ ಹಳದಿ ಬಣ್ನದ ನಿಲುವಂಗಿಯನ್ನು ತೊಡಿಸುತ್ತಾರೆ. ಹೆಂಗಸಾಗಲಿ ಗಂಡಸಾಗಲಿ ಎಲ್ಲಮ್ಮನ ಸೇವೆಗೆಂದು ಹೀಗೆ ತಮ್ಮನ್ನು ಅರ್ಪಿಸಿಕೊಳ್ಳುವವರನ್ನು ಜೋಗಿತಿ ಎಂದು ಕರೆಯುತ್ತಾರೆ. ಹೆಣ್ಣು ಗಂಡು ಎಂದು ಗುರುತಿಸಬೇಕಾದಾಗ ಜೋಗಪ್ಪ-ಜೋಗವ್ವ ಎಂದು ಸಂಬೋಧಿಸುತ್ತಾರೆ. ಜೋಗವ್ವನನ್ನು ಎಲ್ಲಮ್ಮನ ಸೂಳೆ ಅಥವಾ ಎಲ್ಲಮ್ಮನ ಬಸವಿ ಎಂಬುದಾಗಿಯೂ ಕರೆಯುತ್ತಾರೆ.

	ಎಲ್ಲಮ್ಮನನ್ನು ಕುರಿತ ಜನಪದ ಕಾವ್ಯಗಳಲ್ಲಿ ಜೋಗಿತಿ ಸಂಪ್ರದಾಯ ಐತಿಹಾಸಿಕ ಸತ್ಯವೇನೋ ಎಂಬಂತಿರುವ ಓರಂಗಲ್ಲು ಪ್ರತಾಪರುದ್ರನ ಕಥೆ ಇದೆ. ಅಪೂರ್ವತೇಜದ ಮನೋಹರ ರೂಪಲಾವಣ್ಯಗಳಿಂದಲೂ ಮಹಿಮಾತಿಶಯ ಶಕ್ತಿಗಳಿಂದಲೂ ಪ್ರಖ್ಯಾತಳಾಗಿದ್ದ ಎಲ್ಲಮ್ಮನ ಸುರಸೌಂದರ್ಯದ ಸುದ್ದಿಯನ್ನು ಕೇಳಿದ ಪ್ರತಾಪರುದ್ರ ಅವಳಲ್ಲಿ ಮೋಹಗೊಂಡು ಆಕೆಯನ್ನು ಒಪ್ಪಿಸಿ ತಪ್ಪದೆ ಕರೆತರಬೇಕೆಂದು ದೂತರನ್ನಟ್ಟುತ್ತಾನೆ. ಕಾಮಿಯಾದರೂ ತಾನು ಸ್ವಾಮಿ ಎಂಬ ಹೆಗ್ಗಳಿಕೆಯಿಂದ ಬಳಿಯಟ್ಟಿದ ರುದ್ರನನ್ನು ಕಂಡು ಎಲ್ಲಮ್ಮ ಕಿಡಿಕಿಡಿಯಾಗುತ್ತಾಳೆ. ಅವನ ಹಮ್ಮನ್ನು ಮುರಿಯುವ ಪಣತೊಡುತ್ತಾಳೆ. ರುದ್ರ ತನ್ನ ಕಾಮುಕತೆಗಾಗಿ ಬಗೆಬಗೆಯ ಯಾತನೆಯನ್ನು ಅನುಭವಿಸಬೇಕಾಗುತ್ತದೆ. ಪ್ರಾಯಶ್ಚಿತ್ತವಾಗಿ ಅವನು ಪುರಷತ್ವವನ್ನು ಕಳೆದುಕೊಂಡು ಎಲ್ಲಮ್ಮನಿಗೆ ಶರಣಾಗತವಾಗಿ ಸ್ತ್ರೀವೇಷ ಧರಿಸಿಕೊಂಡು ಜಗವನ್ನು ಹೊತ್ತುಕೊಂಡು ಊರು ಊರುಗಳ ಕೇರಿಕೇರಿಗಳ ಮೇಲೆ ಮೆರೆಯಬೇಕಾಗುತ್ತದೆ. ಹೀಗೆ ಜೋಗಿತಿ ಸಂಪ್ರದಾಯ ಪ್ರತಾಪರುದ್ರನಿಂದ ಪ್ರಾರಂಭವಾಗಿ ಅದೇ ಪರಂಪರೆಯಲ್ಲಿ ನಡೆದು ಬರುತ್ತಿದೆ. ಎಲ್ಲಮ್ಮನ ನಿಜವಾದ ಭಕ್ತರೆನಿಸಿಕೊಳ್ಳಬೇಕಾದರೆ ಜೋಗಿತಿಯಾಗಿ ಪರಿವರ್ತನ ಹೊಂದಲೇಬೇಕೆಂಬ ನಂಬಿಕೆ ಭಕ್ತರಲ್ಲಿ ಬಲವಾಗಿ ಬೇರೂರಿಬಿಟ್ಟಿದೆ.

	ಜೋಗಿತಿ ಮನೆತನದವರಿಂದ ಊರುಗಳಲ್ಲಿ ಊರಿಗೊಬ್ಬಳನ್ನಾದರೂ ಜೋಗಿತಿಯಾಗಿ ಬಿಡಬೇಕೆಂಬ ನಿಯಮವಿದೆ. ಜೋಗಿತಿ ಎಲ್ಲಮ್ಮನ ತಂಗಿ ಮಾತಂಗಿ ಎಂದು ಭಾವನೆ. ಅಕ್ಕ ಎಲ್ಲಮ್ಮನ ಸೇವೆ ಮಾಡುವುದು, ಊರಿನ ಎಲ್ಲಮ್ಮನ ಗುಡಿಯ ಪೂಜಾಕಾರ್ಯವನ್ನು ನಡೆಸಿಕೊಂಡು ಬರುವುದು ತಂಗಿ ಜೋಗಿತಿಯ ಕರ್ತವ್ಯ. ಎಲ್ಲಮ್ಮನನ್ನು ಎಲ್ಲ ಜಾತಿಯವರು ಆರಾಧಿಸಿದರೂ ಜೋಗಿತಿ ಬಿಡುವ ಸಂಪ್ರದಾಯ ಮಾತ್ರ ನಿಮ್ನವರ್ಗದವರಲ್ಲಿ ಮಾತ್ರ ಉಳಿದು ಬಂದಿರುವಂತೆ ಕಾಣುತ್ತದೆ.

	ಮುಗ್ಧ ಕನ್ಯೆಯೊಬ್ಬಳನು ಜೋಗಿತಿ ಬಿಡುವುದು ಅಪರಾಧವೆಂದಾಗಲಿ ಅನ್ಯಾಯವೆಂದಾಗಲಿ ಎಲ್ಲಮ್ಮನ ಒಕ್ಕಲಿನವರು ಭಾವಿಸುವುದಿಲ್ಲ. ಅದು ಅವರಿಗೊಂದು ಧಾರ್ಮಿಕವಾದ ಪವಿತ್ರಾಕಾರ್ಯ; ಆ ಜನಾಂಗದ ಆ ಮನೆತನದ ಕುಲಧರ್ಮ.

	ಜೋಗಿತಿ ಬಿಡದಿದ್ದರೆ ಎಲ್ಲಮ್ಮ ಮುನಿದು ಕಷ್ಟಪರಂಪರೆಯ ಜಾಲವನ್ನೇ ಆ ಒಕ್ಕಲಿಗನ ಮೇಲೆ ಬೀಸುತ್ತಾಳಂತೆ ಕೆಲವೊಮ್ಮೆ ಎಲ್ಲಮ್ಮನೇ ಯಾರಾದರೊಬ್ಬನ ಮೇಲೆ ಮೈದುಂಬಿ ಬಂದು ಜೋಗಿತಿ ಬಿಡದೇ ಹೋದುದಕ್ಕಾಗಿಯೇ ಇಂತಿಲ್ಲೆ ಕಷ್ಟಗಳನ್ನು ಕೊಟ್ಟಿದ್ದೇನೆಂದು ತಿಳಿಸುತ್ತಾಳೆ. ಇಂಥ ಸಂದರ್ಭಗಳನ್ನು ಆ ಊರಿನ ಹಿರಿಯರು ಕಟ್ಟೆಚ್ಚರದಿಂದ ಬಳಸಿಕೊಳ್ಳುತ್ತಾರೆ. ಅವರೆಲ್ಲರೂ ಸೇರಿ ಚಿಕ್ಕಪ್ರಾಯದ ಹೆಣ್ಣುಮಗಳೊಬ್ಬಳನ್ನು ಜೋಗ್ತಿ ಬಿಡಲು ಆಯ್ಕೆ ಮಾಡುತ್ತಾರೆ. ಕೆಲವು ತಂದೆ ತಾಯಿಗಳು ತಮ್ಮ ಮಗಳೇ ಜೋಗಿತಿಯಾಗಲಿ ಎಂದು ಹಂಬಲಿಸುವ ನಿದರ್ಶನಗಳೂ ಉಂಟು.

	ಹೆಣ್ಣುಮಕ್ಕಳನ್ನು ಜೋಗಿತಿ ಬಿಡಬೇಕಾದರೆ ಅವಳಿಗೆ ಏಳು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಕೂಡದು. ಹಲ್ಲು ಬಿದ್ದಿರಬಾರದು. ಹಲ್ಲು ಬಿದ್ದು ಹುಟ್ಟಿದ ಅಥವಾ ಖುತುವಂತಿಯಾದ ಹೆಣ್ಣು ಜೋಗಿಯಾಗುವ ಅರ್ಹತೆಯನ್ನು ಕಳೆದುಕೊಳ್ಳುತ್ತಾಳೆ. ಗಂಡುಮಕ್ಕಳು, ಮದುವೆಯಾದ ಮೇಲೆ ಜೋಗಿತಿಯಾಗಬಾರದು. ಇದಕ್ಕೆ ಅಪವಾದಗಳೂ ಉಂಟು. ಮದುವೆಯಾಗಿ ಮಧುರ ಜೀವನವನ್ನು ನಡೆಸುತ್ತಿದ್ದ ಹೆಂಗಸಿನ ಮೇಲೆ. ಗಂಡಸಿನ ಮೇಲೆ ಎಲ್ಲಮ್ಮನ ದೃಷ್ಟಿಬಿದ್ದರೆ ಅವರಿಗೆ ಸಂಸಾರ ವ್ಯವಹಾರದಲ್ಲಿ ನಿರಾಸಕ್ತಿ ಹುಟ್ಟಿ ಅವರು ಕ್ರಮೇಣ ಜಡ್ಡು ಹಿಡಿದು ಮಲಗಿಬಿಡುತ್ತರೆ. ಇದಕ್ಕೆಲ್ಲ ಎಲ್ಲಮ್ಮ ಕಾಡಲು ತೊಡಗಿರುವುದೇ ಕಾರಣವೆಂದು ನಂಬುವ ಜನರು ಜಡ್ಡು ಹತ್ತಿ ನೆಲ ಕಚ್ಚಿರುವವರನ್ನು ಜೋಗತಿ ಮಾಡುವುದಾಗಿ ಹರಕೆ ಹೊರುತ್ತಾರೆ. ಆ ಕ್ಷಣದಲ್ಲಿ ಅವರ ಜಡ್ಡು ಹೇಳಹೆಸರಿಲ್ಲದಂತಾತ್ತದೆ. ಹೆಂಗಸು ಹೀಗೆ ಜೋಗಿತಿಯಾದಾಗ ಗಂಡನಿಂದ ದೂರವಾಗಿ ಸ್ವತಂತ್ರ ಜೀವನವನ್ನು ನಡೆಸಬಹುದು. ಮಡದಿಯಿದ್ದು ಎಲ್ಲಮ್ಮನ ಸೆಳೆತಕ್ಕೆ ಸಿಕ್ಕಿದ ಗಂಡಸು; ಜೋಗಿತಿಯಾದರೆ ನಪುಂಸಕನಾಗುತ್ತಾನಂತೆ. ಅವನಿಗೆ ಆಸೆ, ಆಮಿಷಗಳೇ ಇರುವುದಿಲ್ಲವಂತೆ. ಅವನು ತನ್ನ ಹೆಂಡತಿಯನ್ನು
	ಚಿತ್ತ ಚಂಚಲವಾಗಿ
	ಎತ್ತಲಾದರು ಹೋಗಿ
	ಹುಲ್ಲಿದ್ದ ಕಡೆ ಮೇದು
	ನೀರಿದ್ದ ಕಡೆ ಕುಡಿದು
	ಒಂದು ಉತ್ತಮವಾದ ಸ್ಥಳ ಸೇರಿ
	ಬದುಕಿಕೋ ಉದೋ ಎಕ್ಕುಲ್ದೋ ಉದೋ
ಎಂದು ಹೇಳಿ ಬೀಳ್ಕೊಡುತ್ತಾನೆ.

	ಬಾಲ್ಯದಲ್ಲೇ ಜೋಗಿತಿಯಾದ ಸ್ತ್ರೀ ಪ್ರಾಯಕ್ಕೆ ಬಂದಾಗ ಬಯಸಿದ ಪುರುಷನನ್ನು ನೋಡಿ ತನ್ನ ಲೈಂಗಿಕ ತೃಷೆಯನ್ನು ತೀರಿಸಿಕೊಳ್ಳಲು ಅವಕಾಶವುಂಟು. ಇಚ್ಚೆಪಟ್ಟರೆ ಜೀವನವಿಡೀ ಒಬ್ಬನೇ ಪುರುಷನನ್ನು ನೆಚ್ಚಿ ಸಂಸಾರವನ್ನು ನಡೆಸಬಹುದು. ಇಲ್ಲವೇ ತಾನು ಬಯಸಿದವರೊಂದಿಗೆ ಕೂಡಬಹುದು.

	ಬಾಲ್ಯದಲ್ಲಿ ಜೋಗಿತಿಯಾದ ಬಾಲಕ ತನ್ನ ವಯಸ್ಸಿನ ಕಾಲದಲ್ಲಿ ಹೇಗೆ ಬದುಕುತ್ತಾನೆಂಬುದು ಒಂದು ರಹಸ್ಯ. ಎಲ್ಲಮ್ಮನ ಜೋಗಿತಿಯಾಗಿರುವುದರಿಂದ ಆತ ನಪುಂಸಕನಗಿರುತ್ತಾನೆಂದು ಜನ ಭಾವಿಸುತ್ತಾರೆ. ಇದು ವೈe್ಞÁನಿಕ ಸತ್ಯವಾಗಿದ್ದರೆ ಚರ್ಚೆಯ ಆವಶ್ಯಕತೆಯೇ ಇಲ್ಲ. ಹಾಗಾಗದೇ ಇದ್ದ ಪಕ್ಷದಲ್ಲಿ ಇದು ಆಶ್ಚರ್ಯಕರ ಸಂಗತಿಯಾಗಿದೆ. ಇದರ ಸಾಧ್ಯಾಸಾಧ್ಯತೆಯ ಬಗ್ಗೆ ಏನೊಂದನ್ನೂ ಹೇಳಲಾಗುತ್ತಿಲ್ಲ. ಸಲಿಂಗರತಿ ಇವರಲ್ಲಿರಬಹುದೆ ಎಂಬುದಕ್ಕೆ ಉತ್ತರ ಪಡೆಯುವುದು ಅಷ್ಟು ಸುಲಭವಲ್ಲ. ಅವರು ತಾವು ಲೈಂಗಿಕ ವಿಷಯಗಳ ಬಗ್ಗೆ ನಿರಾಸಕ್ತರೆಂದು ಹೇಳಿಕೊಂಡಿದ್ದಾರೆ. ಆದ್ದರಿಂದ ಜೋಗಿತಿಯರಾಗುವ ಪುರುಷರ ಲೈಂಗಿಕ ನಿಷ್ಕ್ರಿಯೆಗೆ ವೈe್ಞÁನಿಕ ಪರೀಕ್ಷೆಯ ಅಗತ್ಯವಿದೆಯೆಂದಷ್ಟೇ ಹೇಳಬಹುದು. ಒಟ್ಟಿನಲ್ಲಿ ಇವರಲ್ಲಿ ಜೋಗಿರಿ ಸತಿ ಎಲ್ಲಮ್ಮ ಪತಿ ಎನ್ನುವ ಕಲ್ಪನೆ ಇದ್ದ ಹಾಗೆ ತೋರುತ್ತದೆ.

	ಜೋಗಿತಿಯಾಗಲು ಆಯ್ಕೆಯಾದ ಹೆಣ್ಣುಮಗಳೊಬ್ಬಳನ್ನು ಸೂಳೆಬಿಡುವ, ಬಸವಿಬಿಡುವ, ಜೋಗಿತಿಯಾಗಿಸುವ ಸುದ್ದಿ ಊರಿನ ಹತ್ತೂ ಜನಕ್ಕೆ ಹಬ್ಬುತ್ತದೆ. ಯಾವುದಾದರೊಂದು ಮಂಗಳವಾರ ಅಥವಾ ಶುಕ್ರವಾರ ಈ ಕಾರ್ಯವನ್ನು ಇಟ್ಟುಕೊಳ್ಳಲಾಗುತ್ತದೆ. ಇದಕ್ಕೆ ಪರಂಪರೆಯಿಂದ ಬಂದ ಕಟ್ಟುನಿಟ್ಟಾದ ವಿಧಿವಿಧಾನಗಳುಂಟು. ಆಯಾ ಊರಿನ ಎಲ್ಲಮ್ಮನ ಗುಡಿಯ ಮುಂದೆ ಶುಚಿಮಾಡಿ ಸಾರಿಸಿ ದೇವರಿಗೆ ಎದುರಾಗಿ ಕುಂಕುಮ, ಭಂಡಾರ, ಕರ್ಕು (ಇದ್ದಲು ಪುಡಿ), ರಂಗೋಲಿ, ಹಳದಿ, ಬಿಳಿ, ಕೆಂಪು, ಹಸಿರು, ನೀಲಿ ಈ ಒಂಬತ್ತು ಬಗೆಯ ಬಣ್ಣದ ಪುಡಿಗಳಲ್ಲಿ ಒಂದೊಂದನ್ನು ಐದೈದು ಸೇರಿನಂತೆ ಸಂಗ್ರಹಿಸಿ ಸಾರಿಸಿದ ನೆ¯ದ ಮೇಲೆ 'ಜೋಗ್ತಿಪಟ್ಟ ದ ಚಿತ್ರವನ್ನು ಬಿಡಿಸಲಾಗುತ್ತದೆ. ಅದರ ನಾಲ್ಕು ಮೂಲೆಗೂ ಹೊಂಬಾಳೆ, ವೀಳೆಯದೆಲೆ, ಅಂಗನೂಲು, ಅಕ್ಷತೆ ಗಂಧಗಳಿಂದ ಅಲಂಕರಿಸಿದ ಕಳಸಗಳನ್ನಿಡಲಾಗುತ್ತದೆ. ಎಲ್ಲ ಕಳಸಗಳಿಗೂ ಒಂದು ವಿಭೂತಿ ಪಟ್ಟೆ, ಒಂದಚ್ಚು ಬೆಲ್ಲ, ಒಂದು ಚಿಪ್ಪು ಬಾಳೆಹಣ್ಣು, ಎಲೆ, ಅಡಕೆ, ಐದೈದು ಹಣಗಳನ್ನಿಡುತ್ತಾರೆ. ನಾಲ್ಕೂ ಕಳಸಗಳನ್ನು ಬಳಸಿ ಬರುವಂತೆ ಮೂರೆಳೆ ಹಸಿನೂಲನ್ನು ಬಿಡುತ್ತಾರೆ. ಪಟ್ಟದ ನಡುವೆ ಜೋಗಿತಿಯಾಗಲಿರುವ ಹೆಣ್ಣುಮಗಳನ್ನು ಕುಳ್ಳರಿಸಿ ನಾಲ್ಕು ಕಳಸಗಳ ಕುತ್ತಿಗೆಯಿಂದಲೂ ಒಂದೊಂದೆಳೆ ಹಸಿ ನೂಲನ್ನು ಎಳೆದುಕೊಂಡು ಅದನ್ನು ಅವಳ ಕುತ್ತಿಗೆಗೆ ಕಟ್ಟುತ್ತಾರೆ. ಅನಂತರ ಎಲ್ಲಮ್ಮನ ವಂಶಜನೆಂದು ಹೇಳುವ ಕ್ಷತ್ರಿಯ ಕುಲದ ತಾನಿಕ (ಸ್ಥಾನಿಕ) ದರ್ಶನಮಣಿ ಅಥವಾ ಮುತ್ತು ಎಂದು ಕರೆಯಲಾಗುವ 2 ಅಥವಾ 5 ಅಥವಾ 9 ಹಾಲುಮಣಿಗಳನ್ನು ಪೂಣಿಸಿದ ದಾರವನ್ನು ಗುಡಿಯಲ್ಲಿರುವ ಎಲ್ಲಮ್ಮನ ಕೈಗೆ ಒಂದು ತುದಿಯನ್ನೂ ಜೋಗಿಯಾಗುವವಳ ಕುತ್ತಿಗೆಗೆ ಮತ್ತೊಂದು ತುದಿಯನ್ನೂ ಕಟ್ಟುತ್ತಾನೆ. ಈಗ ಎಲ್ಲಮ್ಮದೇವಿಯನ್ನು ಚೌಡಿಗೆ ದನಿಯೊಡನೆ ಧೂಪದೀಪಗಳಿಂದ ಬಗೆಬಗೆಯಾಗಿ ಅರ್ಚಿಸುವ ತಾನಿಕ ಎಲ್ಲಮ್ಮನಿಗೆ ಕೈಗೆ ಕಟ್ಟಿರುವ ದಾರದ ತುದಿಯಿಂದ ದರ್ಶನಮಣಿಗಳನ್ನು ಜೋಗಿತಿಯ ಕುತ್ತಿಗೆಯವರೆಗೂ ಸರಿಸಿಕೊಂಡು ಬಂದು ಉಧೋ ಎಲ್ಲಮ್ಮ, ಉಧೋ ಜಯ ಎಂದು ಹೇಳಿ ಮುತ್ತನ್ನು ಕುತ್ತಿಗೆಗೆ ಕಟ್ಟುತ್ತಾನೆ. ಇಷ್ಟಾದ ಮೇಲೆ ತಾನಿಕ ಹೊಸ ಜೋಗಿತಿಗೆ ಪರಂಪರೆಯಿಂದ ಬಂದ ಕೆಲವು ಸಿದ್ಧ ಪ್ರಶ್ನೆಗಳನ್ನು ಕೇಳಿ ಸಿದ್ಧ ಉತ್ತರಗಳನ್ನು ಪಡೆಯುತ್ತಾನೆ.

	ಯಾರಾದರೂ ಗಂಡಹೆಂಡಂದಿರು ಜೊತೆಯಲ್ಲಿ ಮಲಗಿರುವುದನ್ನು ಕಂಡರೆ ಜೋಗಿತಿ ಅದನ್ನು ಬೇರೆಯವರ ಜೊತೆ ಹೇಳಕÀೂಡದು. ಕಟ್ಟಿದ್ದ ಕರು ಕಿತ್ತುಕೊಂಡು ಹಸುವಿನ ಮೊಲೆಯುಣ್ಣುತ್ತಿದ್ದರೆ ಕರು ಹಾಲನ್ನುಂಡುಕೊಳ್ಳುತ್ತಿದೆ ಎಳೆದುಕೊಳ್ಳಿ ಎಂದು ಹೇಳಬಾರದು. ಹಸು ಕಿತ್ತುಕೊಂಡು ಹೊಲಮೇಯುತ್ತಿದ್ದರೆ ಅದನ್ನು ಓಡಿಸಲು ಹೇಳಬಾರದು. ಸುಳ್ಳುಪಳ್ಳು ಹೇಳಿ ಸುಖ ಪಡೆಯಲು ಪ್ರಯತ್ನಿಸಬಾರದು. ಎಲ್ಲೂ ಊಟ ಸಿಗದಿದ್ದರೆ ತಾನು ಹಸಿದಿರುವ ವಿಷಯವನ್ನು ಯಾರ ಮುಂದೂ ತೋಡಿಕೊಳ್ಳಕೂಡದು. ಬೇರೆಯವರ ಕುತ್ತಿಗೆ ಆಸೆ ಪಡಬಾರದು. ಬಿಸಿಲಲ್ಲಿರುವವರನ್ನು ಕಂಡರೆ ನೆರಳಿಗೆ ಕರೆಯಬೇಕು ಹಸಿದಿದ್ದವರನ್ನು ಕಂಡರೆ ತನ್ನ ತುತ್ತಿನಲ್ಲಿ ಅವರಿಗೂ ಸ್ವಲ್ಪ ಕೊಡಬೇಕು. ಬಾಯಾರಿದವರಿಗೆ ನೀರೆರೆಯಬೇಕು. ಕಷ್ಟದಲ್ಲಿರುವವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಬೇಕು. ಯಾರಾದರೂ ಬೈದರೆ ಹೊಡೆದರು ಹಿಂದಿರುಗಿ ಬೈಯುವುದಾಗಲಿ ಹೊಡೆಯುವುದಾಗಲಿ ಕೂಡದು. ಸತ್ತು ಕೆಟ್ಟವರನ್ನು ಕಂಡರೆ ಸ್ನಾನಮಾಡಿ ಎಲ್ಲಮ್ಮನನ್ನು ಪೂಜಿಸಿ ಅನಂತರ ಊಟ ಮಾಡಬೇಕು. ಅವರಿವರ ಎಂಜಲನ್ನು ನಾಲಗೆಗೆ ಸೋಂಕಿಸಕೂಡದು. ಕುಂತಲ್ಲಿ ಎಲ್ಲಮ್ಮ ಎನ್ನುವ ಸೊಲ್ಲನ್ನು ಮರೆಯಕೂಡದು. ಪ್ರತಿನಿತ್ಯವೂ ಎಲ್ಲಮ್ಮ ದೇವಿಯನ್ನು ತಪ್ಪದೆ ಪೂಜಿಸಬೇಕು. ಇವು ಜೋಗಿತಿಯ ಮುಖ್ಯ ಕರ್ತವ್ಯಗಳು. ಇಷ್ಟಾದ ಮೇಲೆ ತಾನಿಕ ಉಧೋ ಎಲ್ಲಮ್ಮ, ಉಧೋ ಜಯ, ಎಕಲ್ದೊ ಉದೋ, ಜೋಗಲೊ ಉಧೋ ಎಂದು ಹೇಳಿ ಜೋಗಿತಿ ತಲೆಮೇಲೆ ಎಲ್ಲಮ್ಮನ ಜನಹೊರಿಸುತ್ತಾನೆ. ಗಂಡಸಾದರೆ ಜಗಕ್ಕೆ ಬದಲಾಗಿ ಕೈಗೆ ಚೌಡಿಕೆ ಕೊಡುತ್ತಾನೆ. ಉಳಿದವರೆಲ್ಲ ಚೌಡಿಕೆಯನ್ನು ನುಡಿಸುತ್ತ ಹಾಡುತ್ತ ಕುಣಿಯುತ್ತ ಮುಂದಾಗುತ್ತಾರೆ. ಅವರ ಹಿಂದೆ ಜೋಗಿತಿ ನಡೆಮಡಿಯ ಮೇಲೆ ಊರಕೇರಿಯನ್ನು ಪ್ರವೇಶಿಸುತ್ತಾಳೆ.

	ಊರ ಜನ ಹೊಸ ಜೋಗಿತಿಯನ್ನು ಭಕ್ತಿಯಿಂದ ಬರಮಾಡಿಕೊಳ್ಳುತ್ತಾರೆ. ಮೊರದಲ್ಲಿ ಅಕ್ಕಿ, ಅರಿಸಿನ, ಕಂಕುಮ, ಊದುಗಡ್ಡಿ, ಎಲೆಯಡಿಕೆ, ಒಂದು ಹಣ ಮುಂತಾದವನ್ನಿಟ್ಟುಕೊಂಡು ಬಂದು ಜಗಕ್ಕೆ ಅಥವಾ ಚೌಡಿಕೆಗೆ ಭಯಭಕ್ತಿಯಿಂದ ಪೂಜೆ ಮಾಡಿ ಜೋಗಿತಿಯ ಪದಕ್ಕೆ ನಮಸ್ಕಾರ ಮಾಡಿ ಕಣ್ಣಿಗೊತ್ತಿಕೊಂಡು ಭಿಕ್ಷೆ ನೀಡುತ್ತಾರೆ. ಭಿಕ್ಷೆಪಡೆದ ಜೋಗಿತಿ ಅವರ ಹಣೇಗೆ ಎಲ್ಲಮ್ಮನ ಭಂಡಾರವನ್ನು ಹಚ್ಚಿ ಮುಂದೆ ಸಾಗುತ್ತಾಳೆ. ಹೀಗೆ 3 ಅಥವಾ 5 ಅಥವಾ 9 ಮನೆಗಳಲ್ಲಿ ಉಪಾದಾನ ಮಾಡಿಸುತ್ತಾರೆ. ಭಿಕ್ಷದಿಂದ ಬಂದ ಅಕ್ಕಿಯಲ್ಲಿ ಬೆಲ್ಲದನ್ನ ಮತ್ತರು ಉಗ್ಗೇದನ್ನವನ್ನು (ಅರಿಸಿನದ ಅನ್ನ) ಮಾಡಿ ಎಲ್ಲಮ್ಮನಿಗೆ ತಳಿಗೆ ಎರೆಯುತ್ತಾರೆ. ಈ ಪ್ರಸಾದವನ್ನು ಎಲ್ಲರೂ ಭಕ್ತಿಯಿಂದ ಕಣ್ಗೊತ್ತಿಕೊಂಡು ಸೇವಿಸುತ್ತಾರೆ. ಇದು ಅವರವರ ಊರಿನಲ್ಲೇ ಜೋಗ್ತಿ ಬಿಡುವ ಕ್ರಮ. ಇಷ್ಟೆಲ್ಲ ವೆಚ್ಚವನ್ನು ಭರಿಸಲಾರದವರು ಸವದತ್ತಿಯ ಎಲ್ಲಮ್ಮನ ಗುಡ್ಡಕ್ಕೊ ಚಂದ್ರಗುತ್ತಿ ಎಲ್ಲಮ್ಮನ ಗುಡಿಗೊ ಹೋಗಿ ಜೋಗಿತಿಯನ್ನು ಎಲ್ಲಮ್ಮನಿಗೆ ಲಗ್ನ ಮಾಡಿಕೊಡುತ್ತಾರೆ.

	ಎಲ್ಲಮ್ಮನ ಗುಡ್ಡದಲ್ಲಿ ಜೋಗಿತಿ ಬಿಡುವ ಕ್ರಮ ತುಂಬ ಸರಳವಾದುದು. ಐದು ಜನ ಜೋಗಿತಿಯವರು ಜೋಗಿತಿಯಾಗಲಿರುವವಳನ್ನು ಗುಡ್ಡದಲ್ಲಿರುವ ಎಣ್ಣೆಹೊಂಡದಲ್ಲಿ ಮೀಯಿಸುತ್ತಾರೆ. ಮಿಂದು ಮಡಿಯುಟ್ಟು ಜೋಗಿತಿಯನ್ನು ಎಲ್ಲಮ್ಮನ ಗುಡಿಗೆ ಕರೆದುಕೊಂಡು ಬಂದು ಪ್ರತಿe್ಞÁವಾಕ್ಯವನ್ನು ಹೇಳಿಸಿ ಮುತ್ತನ್ನು ದೇವಿಯ ಪಾದಕ್ಕೆ ಮುಟ್ಟಿಸಿ ಜೋಗಿತಿ ಕೊರಳಿಗೆ ಕಟ್ಟುತ್ತಾರೆ. ಈ ಹೊಸ ಜೋಗಿತಿ ತನ್ನ ಊರಿಗೆ ಹಿಂದಿರುಗಿದ ಮೇಲೆ ಐದು ಮಂಗಳವಾರಗಳು ತಪ್ಪದೆ ಉಪಾದನ ಮಾಡಿ ಬಂದ ಭಿಕ್ಷೆಯನ್ನು ಗುಡ್ಡಕ್ಕೆ ತಂದು ಅದರಿಂದ ಮಾಡಿದ ಅಡಿಗೆಯನ್ನು ಮಾತಂಗಿ ಗುಡಿಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿ ಐದಾರು ಜನ ಜೋಗಿತಿಯರಿಗೆ ಬಡಿಸಿ ತಾನೂ ಉಣಬೇಕು. ಹೀಗೆ ಶಾಸ್ತ್ರೀಯವಾಗಿ ಚೌಡಿಕೆ ಹಿಡಿದವರು ಮಾತ್ರ ಜೋಗಿಯಾಗಿರುತ್ತಾರೆಯೇ ಚೌಡಿಕೆ ಹಿಡಿದವರೆಲ್ಲರೂ ಜೋಗಿತಿಯರೆಂದು ತಿಳಿಯುವಂತಿಲ್ಲ. ನೂರಾರು ಜನ ಚೌಡಿಕೆಯವರಿರುವ ಊರಿಗೆ ಜೋಗಿತಿಯವರು ಒಬ್ಬಿಬ್ಬರು ಮಾತ್ರ.

	ಜೋಗಿತಿಯನ್ನು ಯಾರೂ ಯಾವ ಕಾರಣಕ್ಕೂ ಬೈಯುವಂತಿಲ್ಲ. ಹೊಡೆಯುವಂತಿಲ್ಲ. ಎಲ್ಲಮ್ಮ ದೇವಿಯ ಕಾರ್ಯಕ್ಕೆಂದೇ ಮೀಸಲಾದ ಜೋಗಿತಿಯನ್ನು ಎಲ್ಲರೂ ಗೌರವದಿಂದ ನಡೆಸಿಕೊಳ್ಳುತ್ತಾರೆ. ಹೀಯಾಳಿಸಿ ಮಾತನಾಡಿದವರಿಗೆ, ಪ್ರತಾಪರುದ್ರ ಅಹಂಕಾರದಿಂದ ಪತನ ಹೊಂದಿದ ಕತೆಯನ್ನು ನೆನಪು ಮಾಡಿ ಎಚ್ಚರಿಸುತ್ತಾರೆ.

	ಜೋಗಿತಿಯಾದ ಹೆಂಗಸು ಎಲ್ಲಮ್ಮನ ಸತಿಯಾಗಿದ್ದರಿಂದ ಇತರರಂತೆ ಅವಳು ಶಾಸ್ತ್ರೀಯವಾಗಿ ಮದುವೆಯಾಗುವಂತಿಲ್ಲ. ಆದರೆ ಅವಳು ಬಯಸಿದ ಉಪಚಾರದ ಗಂಡನೊಡನೆ ಕೂಡುವ ದಿನದಲ್ಲಿ 'ಹಚ್ಕಟ್ಲೆ ಮಾಡುತ್ತಾರೆ. ಈ ಶೋಭನದ ಕಾರ್ಯ ಎಲ್ಲಮ್ಮನ ಪೂಜೆಯ ಪವಿತ್ರಕಾರ್ಯದಷ್ಟೇ ಮಹತ್ತ್ವಪೂರ್ಣವಾದುದೆಂದು ಭಾವನೆ. ಜೋಗಿತಿಯ ತಲೆಯ ನೋಳ್ಗೂದಲು ಜಡೆಗಟ್ಟಿಕೊಂಡರೆ ಅವಳನ್ನು ಸಾಕ್ಷಾತ್ ಎಲ್ಲಮ್ಮನೆಂದು ಭಾವಿಸಲಾಗುವುದರಿಂದ ಆ ಹೆಣ್ಣು ಮಗಳು ಕಟ್ಟುನಿಟ್ಟಾಗಿದ್ದು ತನ್ನ ಲೈಗಿಂಕ ಬಯಕೆಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಆ ಜನಾಂಗದ ಪುರುಷರೂ ಅವಳನ್ನು ಬಯಸಲು ಹೆದರುತ್ತಾರೆ. ಜಡೆಗಟ್ಟದಿದ್ದ ಜೋಗಿತಿಯರು ಬಸುರಾಗಿ ಹಡೆದ ಕಂದಮ್ಮಗಳನ್ನು. ಉಳಿದೆಲ್ಲ ಜೋಗಿತಿಯರು ಸೇರಿ ಪೋಷಿಸಿ, ಜೋಗಿತಿಯರನ್ನಾಗಿ ಮಾಡುತ್ತಾರೆ.

	ಜೋಗಿತಿಯನ್ನು ಬಿಡುವ ಸಂಪ್ರದಾಯ ಎಷ್ಟು ವಿಚಿತ್ರವೋ ಜೋಗಿತಿಯರ ಶವಸಂಸ್ಕಾರಾದಿಗಳೂ ಅಷ್ಟೇ ವಿಚಿತ್ರವಾಗಿವೆ. ಜೋಗಿತಿಯ ಸಾವಿನ ಸೂಚನೆಯಾಗಿ ಮನೆ ಮುಂದೆ ಬೆಂಕಿ ಕೊಳ್ಳಿ ಉರಿಸುತ್ತಾರೆ. ಹೆಣದ ತೆಲದೆಸೆಯಲ್ಲಿ ಕೈಯೆಣ್ಣೆ ದೀಪ ಹಚ್ಚಿಡುತ್ತಾರೆ. ಹಿಡಿ ಉಪ್ಪಿನ ಗಂಟನ್ನು ಎದೆ ಮೇಲಿರಿಸುತ್ತಾರೆ.

	ಜೋಗಿತಿ ಬಿಡುವಾಗ ಮಾಡಿದಂತೆ ಅಷ್ಟಗಲ ನೆಲವನ್ನು ಸಾರಿಸಿ ಸೆರಗು ಪಟ್ಟ ಎಂಬ ಹೆಸರಿನ ಚಿತ್ರವನ್ನು ಒಂಬತ್ತು ಬಣ್ಣಗಳ ಪುಡಿಗಳಿಂದ ಬಿಡಿಸುತ್ತಾರೆ. ಇದರ ನಡುವ ತೊಳೆದ ಹೆಣವನ್ನು ಮೂಡುಮುಖ ಮಾಡಿ ಕುಳ್ಳಿರಿಸುತ್ತಾರೆ. ನಾಲ್ಕು ಕಳಸಗಳನ್ನು ಇಟ್ಟು ಪೂಜಿಸಿ ಪ್ರತಿಯೊಂದು ಕಳಸಕ್ಕೂ ಅರಿಸಿನ ಕುಂಕುಮ, ಹೂವು, ಎಲೆ, ಅಡಕೆ, ಅಲರಂಗದ ಬಟ್ಟೆಯನ್ನು ಮಡಗುತ್ತಾರೆ. ನಾಲ್ಕು ಕಳಸಗಳನ್ನು ಒಳಗೊಳ್ಳುವಂತೆ ಮೂರು ಸುತ್ತು ಹಸಿನೂಲೆಳೆ ಬಿಡುತ್ತಾರೆ. ನಾಲ್ಕು ಕಳಸಗಳಿಂದಲೂ ಒಂದೊಂದು ಎಳೆ ಹಸಿನೂಲನ್ನು ಎಳೆದುಕೊಂಡು ಹೆಣದ ಕುತ್ತಿಗೆಗೆ ಕಟ್ಟುತ್ತಾರೆ. ಮಿಂದು ಮಡಿಯುಟ್ಟ ಜೋಗ್ತಿಯೊಬ್ಬಳಿಗೆ ಕಣ್ಣುಕಟ್ಟಿ ಹೆಣಕ್ಕೆ ಬೆನ್ನುಮಾಡಿ ಅಷ್ಟು ದೂರದಲ್ಲಿ ನಿಲ್ಲಿಸುತ್ತಾರೆ. ಅವಳನ್ನು ಹಿಂದು ಹಿಂದಕ್ಕೆ ಕರೆದುಕೊಂಡು ಬಂದು ಅವಳೆರಡು ಕೈಗಳನ್ನು ಬೆನ್ನಿನ ಕಡೆಗೆ ನೂಕಿ ಹೆಣದ ಕುತ್ತಿಗೆಯಲ್ಲಿರುವ ದರ್ಶನಮಣಿಹಾರವನ್ನು ನಾಲ್ಕು ಕಳಸಗಳಿಂದ ಎಳೆದುಕೊಂಡಿದ್ದ ನಾಲ್ಕು ದಾರಗಳನ್ನೂ ಕೀಳಿಸುತ್ತಾರೆ. ಹೀಗೆ ಕಿತ್ತಸೆಯುವುದರಿಂದ ಜೋಗ್ತಿಯ ಪ್ರಾಣ ದೇವರ ಸೆರಗಿನಿಂದ ಬಿಡಿಸಿಕೊಂಡಂತಾಯಿತೆಂದು ನಂಬುತ್ತಾರೆ. ಈಗ ಜೋಗಿತಿಯ ಪ್ರಾಣ ಎಲ್ಲಮ್ಮನ ಸತಿಯಾಗಿರದೆ ಮಾನವ ಪ್ರಾಣವಾಗುತ್ತದೆ. ಹೀಗೆ ಮಾಡದೆ ಹೋದಲ್ಲಿ ಅದು ದೇವರ ಸೆರೆಯಲ್ಲಿದ್ದು ದೇವಗಣಕ್ಕೂ ಸೇರದೆ ಮಾನವಗಣಕ್ಕೂ ಸೇರದೆ ಅಂತರಪಿಶಾಚಿಯಾಗುತ್ತದೆಯಂತೆ. ಅದಕ್ಕಾಗಿಯೇ ಸೆರಗಿನಿಂದ ಬಿಡಿಸುವ ಈ ಕಾರ್ಯ. ಈಗ ಆ ಪ್ರಾಣ ಪುಣ್ಯಕರ್ಮಾನುಸಾರ ಯಾವ ಗಣಕ್ಕಾದರೂ ಸೇರಿಕೊಳ್ಳುತ್ತದೆ. ಸೆರಗಿನಿಂದ ಬಿಡುಗಡೆಯಾಗಿ ಪಟ್ಟ ಇಳಿದ ಹೆಣವನ್ನು ಚಿತೆಗೇರಿಸಬಹುದು ಇಲ್ಲವೇ ಮಣ್ಣು ಮಾಡಬಹುದು. ಲೋಕರೂಢಿಯಂತೆ ತಿಥಿ ಇತ್ಯಾದಿ ಉತ್ತರಕ್ರಿಯೆಗಳು ನಡೆಯುತ್ತವೆ. ಚೌಡಿಕೆಯವರು ಆ ದಿನ ಬೆಳಗಾನ ಎಲ್ಲಮ್ಮನ ಕಥೆ ಮಾಡುತ್ತಾರೆ.

	ಹೀಗೆ ಎಲ್ಲಮ್ಮನ ಭಕ್ತರಲ್ಲಿ ಜೋಗಿತಿ ಸಂಪ್ರದಾಯ ಅತ್ಯಂತ ವಿಚಿತ್ರ ರೀತಿಯ ಆಚರಣೆಯಾಗಿದ್ದು ತಲತಲಾಂತರದಿಂದ ಬೆಳೆದುಳಿದು ಬಂದಿದೆ.
(ಪಿ.ಕೆ.ಆರ್.ಎ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ